ಶಾಮರಾವ್ ಕೆ
1917-2002. ಜಿದ್ದು, ಹಟ ಸಾಧಿಸುವ ಛಲ. ಅಂತಃಕರಣಭರಿತ ಪ್ರೀತಿಗಳ ಸಂಗಮವಾಗಿದ್ದ ಶಾಮರಾಯರು ತುಂಗಭದ್ರಾ ದಂಡೆಯ ಎಡಭಾಗದ ಪ್ರದೇಶಕ್ಕೆ ಸೇರಿದವರು. ಆ ಕಡೆಯಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮದಲ್ಲಿ ದಿಗ್ಗಜರಾಗಿ ಬೆಳೆದು ಸೈ ಎನಿಸಿಕೊಂಡರು. ಶಾಮರಾಯರು ಸಂಪಾದಕರಾದ ಬಳಿಕವೂ ಅವರೊಳಗಿನ ವರದಿಗಾರ ಮಂಕಾಗಲಿಲ್ಲ. 
ಶಾಮರಾಯರು ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಾಡಜ್ಜ ಎಂಬ ಗ್ರಾಮದಲ್ಲಿ ಫೆಬ್ರುವರಿ 4, 1913ರಂದು. ತಂದೆ ಕಡ್ಲಬಾಳದ ಹನುಮಂತರಾಯರು ಮೂಲತಃ ದಾವಣೆಗೆರೆ ತಾಲ್ಲೂಕಿನ ಕಡ್ಲಬಾಳು ಗ್ರಾಮದವರು. ತಾಯಿ ಸುಂದರಾಬಾಯಿ. ಶಾಮರಾಯರಿಗೆ ಆ ತಂದೆ ತಾಯಿಗಳ ಮುಖಗಳ ನೆನಪೂ ಇಲ್ಲ. ಹುಟ್ಟಿದ ಆರು ತಿಂಗಳಿಗೇ ಇಬ್ಬರೂ ತೀರಿಕೊಂಡರು. ಅನಾಥಬಾಲಕನಿಗೆ ಆಶ್ರಯ ನೀಡಿದವರು ದೊಡ್ಡಪ್ಪ ಕೆ. ಭೀಮರಾಯರು. ಚಿತ್ರದುರ್ಗದಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿ, ಮೈಸೂರಿಗೆ ಪ್ರಯಾಣ. ಮೈಸೂರಿನ ಇಂಟರ್‍ಮೀಡಿಯಟ್ ಕಾಲೇಜಿಗೆ ಸೇರ್ಪಡೆ. ಪ್ರಿನ್ಸಿಪಾಲರಾದ ನಾಗೇಶರಾಯರಿಂದ ದಿಕ್ಕುಗಾಣದ ವಿದ್ಯಾರ್ಥಿಗೆ ವಾರಾನ್ನದ ವ್ಯವಸ್ಥೆ. ಇಂಟರ್‍ಮೀಡಿಯೆಟ್ ಓದುತ್ತಿದ್ದಾಗ ರಾಜಕುಮಾರ ಜಯಚಾಮರಾಜ ಒಡೆಯರ ಸಹಪಾಠಿಯಾಗಿದ್ದರು. ಅಷ್ಟೇ ಅಲ್ಲ. ಒಡೆಯರ ಅವರ ಎಂಟು ಮಂದಿ ಜೊತೆಗಾರರ ಪೈಕಿ ಶಾಮರಾಯರು ಒಬ್ಬರಾಗಿದ್ದರು. ಹಸಿವು, ಅಲೆದಾಟ, ಆರೈಕೆಯ ಕೊರತೆ, ಕಾರಣ ತೀವ್ರವಾದ ಅನಾರೋಗ್ಯ ; ದುಡಿದುಣ್ಣ ಬೇಕೆಂಬ ಸಂಕಲ್ಪ. ತಾವು ಓದುತ್ತಿದ್ದ ಜಯಕರ್ನಾಟಕ ಪತ್ರಿಕೆ ಕಛೇರಿ ಸೇರಲೆಂದು ಧಾರವಾಡಕ್ಕೆ ಪ್ರಯಾಣ; ನಿರಾಶೆ.
ಬೆಳಗಾವಿಗೆ ಪ್ರಯಾಣ. ಸಂಯುಕ್ತ ಕರ್ನಾಟಕದಲ್ಲಿ ಉದ್ಯೋಗ. ರಂಗನಾಥ್ ದಿವಾಕರ್, ಮೊಹರೆ ಹನುಮಂತರಾವ್, ಚಿಕ್ಗೋಡಿ ಅನಂತಾಚಾರ್ಯರ ಆಶ್ರಯ-ಮಾರ್ಗದರ್ಶನ. ಸ್ವಾತಂತ್ರ್ಯ ಚಳುವಳಿಯ ಕಾಲ. ಆ ದಿನಗಳಲ್ಲಿ ಶಾಮರಾಯರು ಪಡೆದ ಅನುಭವ ಅಪಾರ. ದೊರೆತ ಅವಕಾಶವನ್ನು ಬಿಡದೆ ಮುನ್ನುಗ್ಗಿದರು. ಆ ಚಿಕ್ಕ ವಯಸ್ಸಿನಲ್ಲೇ ಬರುತ್ತಿದ್ದ ಅರ್ಧಮರ್ಧ ಇಂಗ್ಲೀಷಿನಲ್ಲಿ ಅವರು ಮಹಾತ್ಮಗಾಂಧಿಯವರನ್ನು ಮೂರು ಬಾರಿ, ಸರ್ದಾರ ಪಟೇಲ್, ಖಾನ್ ಅಬ್ದುಲ್ ಗಫರ್ ಖಾನ್, ಶಂಕರರಾವ್ ದೇವ್, ಕ್ಷಾಕತ್ ಅಲಿ, ಕಾಕಾ ಕಾಲೇಲ್ಕರ್ ಮೊದಲಾದವರನ್ನು ಸಂದರ್ಶಿಸಿದರು. ರಾಷ್ಟ್ರದ ಸ್ಥಿತಿಗತಿಗಳ ಬಗೆಗೆ ಚರ್ಚೆ ಮಾಡಿದರು. ಸಂಯುಕ್ತ ಕರ್ನಾಟಕ ಹುಬ್ಬಳ್ಳಿಗೆ ಸ್ಥಳಾಂತರಗೊಂಡ ಮೇಲೆ ವರದಿಗಾರರಾಗಿದ್ದ ಶಾಮರಾಯರಿಗೆ ಅಗ್ರಲೇಖನ ಬರೆವ ಅವಕಾಶವನ್ನೂ ಮೊಹರೆ ನೀಡಿದರು. 

ಶಾಮರಾಯರ ವಿಶೇಷ ಅವರ ಅದ್ಭುತ ವರದಿಗಾರಿಕೆಯ ಕೌಶಲ. ಭಾರತ-ಚೀನಾ, ಭಾರತ-ಪಾಕಿಸ್ತಾನ ಯುದ್ಧಗಳ ವರದಿಗಳನ್ನು ಅವರು ಸಂಜಯ ಹೆಸರಿನಲ್ಲಿ ಕಛೇರಿಯಲ್ಲಿ ಕುಳಿತೇ ಸಿದ್ಧಪಡಿಸಿ ಅಪಾರ ಮೆಚ್ಚುಗೆ ಅಭಿಮಾನಗಳಿಸಿದರು. ಸುದ್ದಿ ಸಂಸ್ಥೆಗಳು ಹಾಗೂ ಇಂಗ್ಲಿಷ್ ಪತ್ರಿಕೆಗಳಲ್ಲಿ ವಿಶೇಷವಾಗಿ ಹಿಂದೂ ಪತ್ರಿಕೆಯಲ್ಲಿ ಬರುತ್ತಿದ್ದ ಯುದ್ಧದ ವರದಿಗಳನ್ನು ಕ್ರೋಢೀಕರಿಸಿ ಅದಕ್ಕೆ ತಮ್ಮದೇ ಆದೊಂದಿಷ್ಟು ಕಲ್ಪನೆ ಬೆರೆಸಿದ ಸಿದ್ಧಪಡಿಸಿದ ವರದಿಗಳನ್ನು ಕನ್ನಡ ಓದುಗರಿಗೆ ಉಣಬಡಿಸುತ್ತಿದ್ದರು. ಅರಮನೆಯಲ್ಲಿ ಕುಳಿತ ಧೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧದ ಚಿತ್ರಣವನ್ನು ಸಂಜಯ ನೀಡಿದಂತೆ ಶಾಮರಾಯರು ಓದುಗರಿಗೆ ಯುದ್ಧ ವರದಿಗಳನ್ನು ಒಪ್ಪಿಸುತ್ತಿದ್ದ ಬಗೆ ಅನನ್ಯವಾಗಿತ್ತು. ಸಂಜಯ ಅಂಕಿತನಾಮದಲ್ಲಿ ಅವರು ನೀಡುತ್ತಿದ್ದ ಈ ಲೇಖನಮಾಲೆ (ಮುನ್ನೂರ ಎಂಬತ್ತು ಲೇಖನಗಳ) ಧ್ವನಿ ಪೂರ್ಣವಾಗಿತ್ತು. ಆ ಬಗೆಯ ವರದಿಗಳು ಮತ್ತೆ ಕನ್ನಡ ಪತ್ರಿಕೋದ್ಯಮದಲ್ಲಿ ಕಾಣಬರಲಿಲ್ಲ ಎನ್ನುವುದು ಶಾಮರಾಯರ ಹೆಚ್ಚುಗಾರಿಕೆಯನ್ನು ಹೇಳುತ್ತದೆ.
ಅಂಕಣ ಜನಪ್ರಿಯವಾದಂತೆ `ಸಂಜಯ ಎನ್ನುವ ಹೆಸರು ಔನ್ನತ್ಯಕ್ಕೆ ಏರ ತೊಡಗಿತು. ಕಿರಿಯ ಉದ್ಯೋಗಿಯೊಬ್ಬರಿಗೆ ತನಗಿಂತ ಐದು ರೂಪಾಯಿ ಸಂಬಳ ಹೆಚ್ಚು ಕೊಟ್ಟ ಕಾರಣಕ್ಕೆ ಬೇಸತ್ತು ಕೆಲಸಕ್ಕೆ ರಾಜಿನಾಮೆ ನೀಡಿದರು. ಪತ್ರಿಕೋದ್ಯಮದಲ್ಲೊಂದು ತಮಗೆ ಸ್ಥಾನ ದೊರಕಿಸಿಕೊಟ್ಟ `ಸಂಜಯ ಎಂಬ ಹೆಸರಿನಲ್ಲೇ ದಾವಣಗೆರೆಯಲ್ಲೊಂದು ವಾರಪತ್ರಿಕೆ ಆರಂಭಿಸಿದರು. ಪತ್ರಿಕೆ ದೊಡ್ಡಮಟ್ಟಕ್ಕೆ ಬೆಳೆಯಿತು. ಪತ್ರಿಕೆ ಉಚ್ಛ್ರಾಯದಲ್ಲಿ ನಡೆಯುತ್ತಿದ್ದಾಗ ಇಟಗಿ ವೇದಮೂರ್ತಿ ಎಂಬುವರು ದಿನಪತ್ರಿಕೆ ಆರಂಭಿಸಿದರು. ಶಾಮರಾಯರು ಸ್ಪರ್ಧೆಗೆ ಬಿದ್ದು ಸಂಜಯವನ್ನು ದೈನಿಕ ಪತ್ರಿಕೆಯನ್ನಾಗಿ ಪರಿವರ್ತಿಸಿದರು. ಪತ್ರಿಕೆ ಆರ್ಥಿಕವಾಗಿ ಬೆಳೆಯಲಿಲ್ಲ. ಕೈ ಬರಿಯದಾಯಿತು.  ಈ ಸಂದರ್ಭದಲ್ಲಿ ಸಂಯುಕ್ತ ಕರ್ಣಾಟಕ ಮತ್ತೆ ಅವರಿಗೆ ಕೈಬೀಸಿ ಕರೆಯಿತು. ಸಂಯುಕ್ತ ಕರ್ಣಾಟಕದ ಬೆಂಗಳೂರು  ಆವೃತ್ತಿಯ ಹೊಣೆ ಹೊತ್ತರು. 

1974ರಲ್ಲಿ ಶಾಮರಾಯರು ಪುನಃ ಸಂಯುಕ್ತ ಕರ್ನಾಟಕದಿಂದ ಹೊರಬಂದರು. ಆಡಳಿತವರ್ಗ ಪತ್ರಿಕಾ ಸಮೂಹವನ್ನು ಪರಭಾರೆ ಮಾಡಿದ್ದನ್ನು ಪ್ರತಿಭಟಿಸಿ ಹೊರಬಿದ್ದ ಶಾಮರಾಯರು ಆ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಹನ್ನೆರಡು ವರ್ಷ ಕಾಲ ನಡೆದ ಈ ಹೋರಾಟದಲ್ಲಿ ಜಯಶೀಲರಾದ ರಾಯರು ಮತ್ತೆ ಅದರ ಮುಖ್ಯಸ್ಥರಾಗಿ ಸಂಯುಕ್ತ ಕರ್ನಾಟಕಕ್ಕೆ ಮರಳಿದರು. ಕರ್ಮವೀರ, ಕಸ್ತೂರಿ ಪತ್ರಿಕೆಗಳಿಗೆ ಮರುಜನ್ಮ ನೀಡಿದರು. ಸಂಪಾದನ ವಿಭಾಗ, ವರದಿಗಾರಿಕೆ ಈ ಎರಡೂ ಕವಲುಗಳಲ್ಲಿ ಪರಿಣತಿ ಹೊಂದಿದ್ದ ಅವರು ಎರಡು ಮೂರು ಪೀಳಿಗೆಯ ಪತ್ರಕರ್ತರ ಪಾಲಿಗೆ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ವೃತ್ತಿ ಕಲಿಕಾಶಾಲೆಯನ್ನಾಗಿಸಿದ್ದರು. ಅವರ ಸೇವೆ ಗಮನಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಮತ್ತು 1995ರ ಟೀಯೆಸ್ಸಾರ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಕೆ. ಶಾಮರಾಯರು 2002ರ ಡಿಸೆಂಬರ್ 12ರಂದು ನಿಧನ ಹೊಂದಿದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ